Thursday, March 25, 2021

ಕ್ರಾಂತಿ ಹಾಗೂ ರಾಷ್ಟ್ರ ಪ್ರಭತ್ವಗಳ ಉದಯ

Admin       Thursday, March 25, 2021

ಆಧುನಿಕ ಯುಗದ ಆರಂಭವನ್ನು ಸೂಚಿಸುವ ಬಹುಮುಖ್ಯ ಅಂಶವೆಂದರೆ ರಾಷ್ಟ್ರೀಯ ಪ್ರಭುತ್ವಗಳ ಉದಯ. ಸಾಮಾನ್ಯವಾಗಿ 15, 16 ಮತ್ತು 17ನೇ ಶತಮಾನಗಳಲ್ಲಿ ತಲೆಯೆತ್ತಿದ ಈ ರಾಜ್ಯಗಳ ರಚನೆಗೆ ತರ್ಕಬದ್ಧವಾದ ಆಧಾರವಿಲ್ಲ. ಅವು ಚಕ್ರಾಧಿಪತ್ಯದಿಂದ ಹಿಡಿದು ನಗರ ರಾಜ್ಯಗಳವರೆಗೆ ವೈವಿಧ್ಯತೆಯನ್ನು ಹೊಂದಿದ್ದವು. ಆ ರಾಜ್ಯಗಳಲ್ಲಿ ವಾಸಿಸುತ್ತಿದ್ದ ಜನರು ಒಂದೇ ಬಗೆಯವರಾಗಿರಲಿಲ್ಲ. ಅವರು ಬೇರೆ ಬೇರೆ ರಾಷ್ಟ್ರೀಯತ್ವವನ್ನು ಪಡೆದವರಾಗಿದ್ದರು.

ಊಳಿಗಮಾನ್ಯ ಪದ್ಧತಿಯತ ಅವನತಿಯಿಂದ ಉಂಬಳಿ ಜಮೀನ್ದಾರರ ರಾಜಕೀಯ ಶಕ್ತಿಯೂ ಕುಂದಿತು. ಇದರಿಂದ ಯುರೋಪಿನ ಅನೇಕ ರಾಜರು ಉಂಬಳಿ ಜಮೀನ್ದಾರರ ಮೇಲಿದ್ದ ತಮ್ಮ ಅವಲಂಭನೆಯನ್ನು ಕಡಿಮೆ ಮಾಡಿಕೊಂಡು ಎಲ್ಲಾ ಅಧಿಕಾರವನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರು. ಅನೇಕ ರಾಜರುಗಳು ದೈವದತ್ತಾಧಿಕಾರದಲ್ಲಿ ನಂಬಿಕೆ ಇಟ್ಟಿದ್ದು ಪ್ರಜೆಗಳಿಗೆ ಉತ್ತರಿಸಬೇಕಿಲ್ಲವೆಂದು ತಿಳಿದಿದ್ದರು.

ಮಧ್ಯಮ ವರ್ಗವು ತನ್ನ ಹಿತದೃಷ್ಠಿಯಿಂದ ರಾಜರುಗಳಿಗೆ ಬೆಂಬಲ ನೀಡಿತು ಮತ್ತು ರಾಷ್ಟ್ರೀಯ ಪ್ರಭುತ್ವಗಳ ಉದಯ ಮತ್ತು ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ರಾಷ್ಟ್ರೀಯ ಭಾವನೆ ಅಥವಾ ದೇಶಪ್ರೇಮ ತನ್ನದೇ ಆದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಹೊಂದಿದ್ದಿತು. ಈ ರಾಷ್ಟ್ರಗಳು ಊಳಿಗಮಾನ್ಯ ಕಾಲದ ಅನಾಯಕತ್ವವನ್ನು ಅಂತ್ಯಗೊಳಿಸಿದವು. ಅವು ಒಂದೇ ಬಗೆಯ ಸಂಸ್ಕೃತಿಯನ್ನು ಹೊಂದಿದ್ದ ಜನರನ್ನು ಒಬ್ಬ ದೊರೆಯ ಆಳ್ವಿಕೆಯಲ್ಲಿ ಒಟ್ಟುಗೂಡುವಂತೆ ಮಾಡಿದವು.

ರಾಷ್ಟ್ರ-ರಾಷ್ಟ್ರಗಳ ನಡುವೆ ಘರ್ಷಣೆ ಮತ್ತು ಪೈಪೋಟಿ ಪ್ರಾರಂಭವಾಯಿತು. ಅಮೇರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ವ್ಯಾಪಾರ ಮತ್ತು ವಸಾಹತುಗಳ ಹತೋಟಿಗಾಗಿ ಘರ್ಷಣೆ ಮತ್ತು ಯುದ್ಧಗಳಿಗೆ ಅವಕಾಶ ಮಾಡಿಕೊಟ್ಟಿತು.

ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮ
ಅಮೇರಿಕಾ ಖಂಡವನ್ನು ಕಂಡುಹಿಡಿದ ನಂತರ ಯುರೋಪಿನ ಅನೇಕ ದೇಶಗಳು ಅಲ್ಲಿ ವಸಾಹತುಗಳನ್ನು ಸ್ಥಾಪಿಸಲು ಪ್ರಾರಂಭಿಸಿದವು. ಉತ್ತರ ಅಮೇರಿಕಾದಲ್ಲಿ ಸ್ಥಾಪಿಸಿದ ದೇಶಗಳಲ್ಲಿ ಫ್ರಾನ್ಸ್, ಸ್ಪೈನ್, ಹಾಲೆಂಡ್ ಮತ್ತು ಇಂಗ್ಲೆಂಡ್ ಮುಖ್ಯವಾದವು. ಉತ್ತರ ಅಮೇರಿಕಾದ ಅಟ್ಲಾಂಟಿಕ್ ತೀರದ ಉದ್ದಕ್ಕೂ ಇಂಗ್ಲೆಂಡಿನ ಹದಿಮೂರು ವಸಾಹತುಗಳು ಸ್ಥಾಪನೆಗೊಂಡವು. ಇವುಗಳನ್ನು “ಹೊಸ ಇಂಗ್ಲೀಷ್ ವಸಾಹತುಗಳ” ಎಂದು ಕರೆಯಲಾಗಿತ್ತು.. ಉತ್ತರ ಅಮೇರಿಕಾದಲ್ಲಿ ವಸಾಹತುಗಳ ಸ್ಥಾಪನೆಗೆ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳು ಮುಖ್ಯ ಸ್ಪರ್ಧಿಗಳಾಗಿದ್ದವು. ಸಂಪೂರ್ಣ ಸ್ವಾತಂತ್ರ್ಯದ ಹೆಬ್ಬಯಕೆಯು ಅಮೇರಿಕಾದ ವಸಾಹತುಗಳು ಇಂಗ್ಲೆಂಡಿನ ವಿರುದ್ಧ ದಂಗೆ ಏಳುವಂತೆ ಮಾಡಿತು.

ಕಾರಣಗಳು
ವಸಾಹತುಗಳ ಬಗ್ಗೆ ಮಾತೃದೇಶದ ಧೋರಣೆ ಮತ್ತು ವಸಾಹತುಗಳ ಸ್ವಾತಂತ್ರ್ಯ ಪ್ರೇಮ, ಸಪ್ತವಾರ್ಷಿಕ ಯುದ್ಧದ ಪರಿಣಾಮಗಳು, ನೌಕಾ ಕಾಯಿದೆಗಳು, ಧಾಮಸ್ ಫೈನ್, ಜಾನ್ ಆಡಮ್ಸ್, ಸ್ಯಾಮುಯಲ್ ಆಡಮ್ಸ್, ಜಾನ್ ಎಡ್ವರ್ಡ್ ಕೋಕ್ ಮತ್ತು ಬೆಂಜಮಿನ್ ಫ್ರಾಂಕ್ಲಿನ್ ಮುಂತಾದ ಬರಹಗಾರರ ಪ್ರಭಾವ, ಕ್ವಿಬೆಕ್ ಕಾಯ್ದೆ, ಟೌನ್ ಶೆಂಡ್ ತೆರಿಗೆಗಳು ಮತ್ತು ಬಾಸ್ಟನ್ ಚಹಾಕೂಟ ಮುಂತಾದ ಕಾರಣಗಳಿಂದಾಗಿ ಅಮೇರಿಕಾದಲ್ಲಿ ಕ್ರಾಂತಿ ಉಂಟಾಯಿತು.

ಸ್ವಾತಂತ್ರ್ಯ ಘೋಷಣೆ
ಪರಿಸ್ಥಿತಿವನ್ನು ವಿರ್ಮಶಿಸಲು ಕ್ರಿ.ಶ 1774ರಲ್ಲಿ ಅಮೇರಿಕದ ಹದಿಮೂರು ಇಂಗ್ಲೀಷ್ ವಸಾಹತುಗಳ ಪ್ರತಿನಿಧಿಗಳು ಫಿಲಿಡೆಲ್ಫಿಯಾ ನಗರದಲ್ಲಿ ಸಭೆ ಸೇರಿದರು. ಅವರು ತಮ್ಮ ಸ್ವಾತಂತ್ರವನ್ನು ಮೊಟಕುಗೊಳಿಸುವ ತಾಯ್ನಾಡಿನ ಪ್ರಯತ್ನಗಳನ್ನು ಸಶಸ್ತ್ರ ಬಲದಿಂದ ಪ್ರತಿಭಟಿಸುವುದಾಗಿ ನಿರ್ಧರಿಸಿದರು.. ಬ್ರಿಟನ್ನಿನ ರಾಜ ಅವರ ಕ್ರಮವನ್ನು ದಂಗೆ ಎಂದು ಘೋಷಿಸಿದನು ಮತ್ತು ವಸಾಹತುಗಾರರ ಪ್ರತಿಭಟನೆಯನ್ನು ಅಡಗಿಸಲು ಸೈನ್ಯ-ತುಕಡಿಗಳನ್ನು ಕಳುಹಿಸಿದನು. ವಸಾಹತುಗಾರರಿಗೆ ಈಗ ತಮ್ಮ ಸ್ಥಳೀಯ ಸೈನ್ಯದೊಡನೆ ಬ್ರಟಿಷರನ್ನು ಎದುರಿಸುವುದರ ಹೊರತು ಬೇರೆ ಮಾರ್ಗವೇ ಇರಲಿಲ್ಲ. ಈ ರೀತಿಯಲ್ಲಿ ಕ್ರಿ.ಶ 1775, ಏಪ್ರಿಲ್ 19ರಂದು “ಲೆಕ್ಸಿಂಗ್ ಟನ್” ಎಂಬಲ್ಲಿ ವಸಾಹತುಗಾರರ ಒಂದು ಸೈನ್ಯದ ತುಕುಡಿಯು ಬ್ರಿಟಿಷರ ಮೇಲೆ ದಾಳಿ ಮಾಡಿದಾಗ, ಅಮೇರಿಕಾದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಬವಾಯಿತು. ಫಿಲಿಡೆಲ್ಫಿಯಾ ಸಭೆಯು ಆಗ ಜಾರ್ಜ್ ವಾಷಿಂಗ್ಟನ್ ನನ್ನು ವಸಾಹತುಗಾರರ ಸೈನ್ಯದ ದಂಡನಾಯಕನನ್ನಾಗಿ ನೇಮಿಸಿತು.

ಜಾರ್ಜ್ ವಾಷಿಂಗ್ಟನ್
ಜಾರ್ಜ್ ವಾಷಿಂಗ್ಟನ್ ವರ್ಜೀನಿಯಾದ ಒಬ್ಬ ತೋಟಗಾರ. ಇವನು ಫ್ರೆಂಚರ ವಿರುದ್ಧ ನಡೆದ ಸಪ್ತ ವಾರ್ಷಿಕ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿ, ಸೈನ್ಯಾಧಿಕಾರಿಯಾಗಿ ಕೀರ್ತಿ ಗಳಿಸಿದ್ದ. ಅವನು ಅಶಿಕ್ಷಿತ ಮತ್ತು ಅವ್ಯವಸ್ಥಿತ ವಸಾಹತು ಸೈನಿಕರನ್ನು ಸ್ಥೈರ್ಯ ಮತ್ತು ಉತ್ಸಾಹಗಳಿಂದ ಹುರಿದುಂಬಿಸಿದ. ಅವರು ಬ್ರಿಟಿಷರೊಡನೆ ಧೈರ್ಯದಿಂದ ಹೋರಾಡುವಂತೆ ಮಾಡಿದ. ಕ್ರಿ.ಶ 1776, ಜುಲೈ 4ರಂದು ಫಿಲಿಡೆಲ್ಫಿಯಾದ ರಾಷ್ಟ್ರೀಯ ಸಭೆಯು ಪ್ರಖ್ಯಾತವಾದ ಸ್ವಾತಂತ್ರ್ಯ ಘೋಷಣೆಯನ್ನು ಅಂಗೀಕರಿಸಿತು ಹಾಗೂ ಎಲ್ಲಾ ಹದಿಮೂರು ವಸಾಹತುಗಳೂ ತಾಯ್ನಾಡಿನಿಂದ ಎಲ್ಲಾ ರಾಜಕೀಯ ಸಂಬಂಧವನ್ನು ಕಡಿದುಕೊಂಡು ಸ್ವತಂತ್ರವಾಗಿವೆ ಎಂದು ಘೋಷಿಸಿತು.

ಯುದ್ಧ
ಇಂಗ್ಲೆಂಡ್ ಮತ್ತು ವಸಾಹತುಗಳ ನಡುವಿನ ಯುದ್ಧ ಐದು ವರ್ಷಗಳ ಕಾಲ ಸಾಗಿತು. ಆರಂಭದಲ್ಲಿ ವಸಾಹತುಗಳಿಗೆ ಹಿನ್ನೆಡೆಯಾಯಿತು. ಜಾರ್ಜ್ ವಾಷಿಂಗ್ಟನ್ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ‘ಸಾರಟೋಗ’ ಯುದ್ಧದಲ್ಲಿ ಬ್ರಿಟಿಷ್ ಸೇನೆಯು ಸೋತಿತು. ಫ್ರೆಂಚರ ಸೇನೆಯ ಸಹಾಯದಿಂದ ಜಾರ್ಜ್ ವಾಷಿಂಗ್ಟನ್ನನು ಯಾರ್ಕ್ ಟೌನ್ ಕದನದಲ್ಲಿ ಬ್ರಿಟಿಷರ ಸೇನೆಯನ್ನು ಸಂಪೂರ್ಣವಾಗಿ ಸೋಲಿಸಿದನು. ಬ್ರಿಟಿಷ್ ಸೇನಾನಿ ಕಾರ್ನ್ ವಾಲೀಸನು ತನ್ನ ಪಡೆಯೊಂದಿಗೆ ಶರಣಾದನು. ಕ್ರಿ.ಶ 1783ರ ಪ್ಯಾರಿಸ್ ಒಪ್ಪಂದದಂತೆ ಹದಿಮೂರು ವಸಾಹತುಗಳನ್ನು ಬ್ರಿಟಿನ್ ಸ್ವತಂತ್ರವೆಂದು ಅಂಗೀಕರಿಸಿತು. ಜುಲೈ 4ರಂದು ಸ್ವಾತಂತ್ರ್ಯ ಗೋಷಣೆ ಮಾಡಿದ್ದರಿಂದ ಅಮೇರಿಕನ್ನರಿಗೆ ಅದು ಮಹತ್ವದ ದಿನವಾಯಿತು. ಇಂದಿಗೂ ಜುಲೈ 4ನ್ನು ಅಮೇರಿಕನ್ನರು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತಾರೆ.
  ಕ್ರಿ.ಶ 1787ರಲ್ಲಿ ಫಿಲಿಡೆಲ್ಫಿಯಾದಲ್ಲಿ ಸ್ವಾತಂತ್ರ್ಯ ಪಡೆದ ಎಲ್ಲಾ ವಸಾಹತುಗಳ ಪ್ರತಿನಿಧಿಗಳು ಸಭೆ ಸೇರಿ, ಜಾರ್ಜ್ ವಾಷಿಂಗ್ಟನ್ ನನ್ನು ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷನನ್ನಾಗಿ ಆರಿಸಿದರು. ಅವರುಗಳು ಒಂದು ಸಂವಿಧಾನವನ್ನು ರಚಿಸಿದರು. ಅದೇ ಜಗತ್ತಿನ ಪ್ರಥಮ ಲಿಖಿತ ಸಂವಿಧಾನವಾಯಿತು.

ಅಮೇರಿಕ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮಗಳು
ಇದು ಫ್ರಾನ್ಸಿನ ಮಹಾಕ್ರಾಂತಿಗೆ ಪ್ರಚೋದನೆ ನೀಡಿತು. ವಸಾಹತುಗಾರರ ಪಕ್ಷ ವಹಿಸಿ ಹೋರಾಡಿದ ಅನೇಕ ಫ್ರೆಂಚರು ಫ್ರಾನ್ಸಿನ ಮಹಾಕ್ರಾಂತಿಯ ನಾಯಕರಾದರು. ಅಮೇರಿಕಾದಲ್ಲಿನ ಅನೇಕ ಸ್ಪೈನ್ ಮತ್ತು ಪೂರ್ಚ್ ಗಲ್ ನ ವಸಾಹತುಗಳು ತಮ್ಮ ತಾಯ್ನಾಡಿನ ವಿರುದ್ಧ ದಂಗೆ ಎದ್ದು ಸ್ವತಂತ್ರರಾಗಲು ಉತ್ತೇಜನ ಪಡೆದವು. ಅಮೇರಿಕ ಸಂಯುಕ್ತ ಸಂಸ್ಥಾನ ಎಂಬ ಹೊಸ ರಾಷ್ಟ್ರದ ಉದಯವಾಯಿತು.


ಫ್ರಾನ್ಸಿನ ಮಹಾಕ್ರಾಂತಿ
ತಮ್ಮ ದೊರೆಗಳ ನಿರಂಕುಶ ಪ್ರಭುತ್ವವನ್ನು ಕೊನೆಗಾಣಿಸಿ, ಸಮಾನತೆ ಮತ್ತು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಹೊಸ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಸ್ಥಾಪಿಸುವುದೇ ಫ್ರೆಂಚ್ ಕ್ರಾಂತಿಯ ಪ್ರಮುಖ ಉದ್ದೇಶವಾಗಿತ್ತು. ಇದು ಜಗತ್ತಿನ ಇತರ ದೇಶಗಳ ರಾಜಕೀಯ ಚಳುವಳಿಗಳ ಮೇಲೂ ಅಗಾಧವಾದ ಪ್ರಭಾವವನ್ನು ಬೀರಿತು. ಫ್ರಾನ್ಸಿನ ಕ್ರಾಂತಿಗೆ ಈ ಕೆಳಕಂಡ ಅಂಶಗಳು ಕಾರಣವಾದವು.

ಸಾಮಾಜಿಕ ಕಾರಣಗಳು
ಫ್ರೆಂಚ್ ಸಮಾಜದಲ್ಲಿ ಅಸಮಾನತೆ ಎಲ್ಲಾ ರಂಗದಲ್ಲೂ ತಾಂಡವವಾಡುತ್ತಿತ್ತು. ಅದು ದುಸ್ಸಹನೀಯ ಮತ್ತು ಅಮಾನವೀಯವಾಗಿತ್ತು. ಈ ಅಸಮಾನತೆಯ ನೋವು ಜನತೆಯ ಹೃದಯದಲ್ಲಿ ರೋಷವಾಗಿ ಕ್ರಾಂತಿಗೆ ಎಡೆಯಾಯಿತು. ಕ್ರಾಂತಿಗೆ ಮುನ್ನ ಫ್ರಾನ್ಸ್ ನ ಸಮಾಜದಲ್ಲಿ ಮೂರು ವರ್ಗಗಳಿದ್ದವು. ಮೊದಲ ವರ್ಗದಲ್ಲಿ ಪಾದ್ರಿಗಳು, ಎರಡನೇ ವರ್ಗದಲ್ಲಿ ಶ್ರೀಮಂತರು ಮತ್ತು ಉಳಿದೆಲ್ಲ ಸಾಮಾನ್ಯರು ಮೂರನೇ ವರ್ಗದಲ್ಲಿದ್ದರು.
ಮೊದಲ ಎರಡು ವರ್ಗದವರು ಎಲ್ಲಾ ರೀತಿಯ ಅನುಕೂಲಗಳನ್ನು ಪಡೆಯುತ್ತಿದ್ದರು. ಹಾಗೂ ಅವರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದವರು. ಎಲ್ಲಾ ರೀತಿಯ ತೆರಿಗೆಗಳಿಂದ ವಿನಾಯಿತಿ ಪಡೆದಿದ್ದು ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು.
ಮೂರನೇ ವರ್ಗದವರು ಸೌಲಭ್ಯ ವಂಚಿತರಾಗಿದ್ದರು. ಬುದ್ಧಿಜೀವಿಗಳು, ಕೃಷಿಕರು., ಕಾರ್ಮಿಕರು ಮತ್ತು ವೃತ್ತಿಪರರು ಇದರಲ್ಲಿ ಸೇರಿದ್ದರು. ಅವರ ಆದಾಯ ತೀರ ಕಡಿಮೆ. ತೆರಿಗೆಗಳು ವಿಪರೀತ. ಅವರ ಜೀವನ ದುಃಸ್ಥಿತಿಯಲ್ಲಿತ್ತು. ಈ ಎಲ್ಲಾ ಜನರಿಗೆ ಸಮಾಜದಲ್ಲಿ ಗೌರವದ ಸ್ಥಾನವಿರಲಿಲ್ಲ. ರಾಜಕೀಯ ಹಕ್ಕುಗಳಿರಲಿಲ್ಲ ಹಾಗೂ ಅವರು ಅವಮಾನಗಳನ್ನು ಅನುಭವಿಸಬೇಕಾಗಿತ್ತು. ಅವರಿಗೆ ಮತೀಯವಾಗಿಯಾಗಲಿ ಅಥವಾ ರಾಜಕೀಯವಾಗಿಯಾಗಲಿ ಅಥವಾ ಯಾವುದೇ ವಿಧವಾದ ಸ್ವಾತಂತ್ರ್ಯ ಇರಲಿಲ್ಲ. ಫ್ರಾನ್ಸಿನ ಜನರಲ್ಲಿ ಅವರೇ ಅತ್ಯಂತ ಅಸಮಾಧಾನಗೊಂಡಿದ್ದ ಜನರು. ಅವರು ಹಳೆಯ ವ್ಯವಸ್ಥೆಗಳನ್ನು ತೊಡೆದು ಹಾಕಲು ಸಮಯ ಕಾಯುತ್ತಿದ್ದರು.

ಆರ್ಥಿಕ ಕಾರಣಗಳು
ಫ್ರಾನ್ಸ್ ಕೃಷಿ ಪ್ರಧಾನವಾದ ದೇಶವಾಗಿತ್ತು. ಕೃಷಿ ಪದ್ಧತಿಯಲ್ಲಿ ಅಭಿವೃದ್ಧಿಗಳು ಆಗಿದ್ದರೂ ಸಹ, ಕೃಷಿ ಬಹಳ ಹಿಂದುಳಿದಿತ್ತು. ಭೂಮಿಯ ಉತ್ಪತ್ತಿ ಬಹಳ ಕಡಿಮೆಯಿತ್ತು. ರೈತರೇ ಹೆಚ್ಚಿನ ತೊಂದರೆಗೊಳಗಾಗಿದ್ದವರು. ಬರಗಾಲಗಳು ಸಾಮಾನ್ಯವಾಗಿದ್ದವು. ಇದರಿಂದ ಆಹಾರಕ್ಕಾಗಿ ದಂಗೆಗಳಾಗುತ್ತಿದ್ದವು. ಕೈಗಾರಿಕೆಗಳು ವೃತ್ತಿಸಂಘಗಳ ಅಧೀನದಲ್ಲಿದ್ದವು. ಆಂತರಿಕ ಅಡ್ಡಿಗಳಿಂದಲೂ ಮತ್ತು ಅಧಿಕಾರಿಗಳ ಅತಿಯಾದ ಮಧ್ಯ ಪ್ರವೇಶದಿಂದಲೂ ಅವುಗಳ ಬೆಳವಣಿಗೆ ಕುಂಠಿತಗೊಂಡಿತ್ತು. ಇದರ ಫಲವಾಗಿ ಉತ್ಪಾದನೆ ಕೆಳಮಟ್ಟದಲ್ಲಿತ್ತು.

ರಾಜಕೀಯ ಕಾರಣ
ಫ್ರಾನ್ಸನ್ನು ಬೂರ್ ಬನ್ ಮನೆತನದವರು ಆಳುತ್ತಿದ್ದರು. ಈ ಸಂತತಿಯ 16ನೇ ಲೂಯಿ ಭವ್ಯ ಅರಮನೆಯಲ್ಲಿ ರಾಜಮನೆತನದವರೊಂದಿಗೆ ಅವನು ಆರಾಮವಾದ ಮತ್ತು ಸುಖಲೋಲುಪತೆಯಿಂದ ಕೂಡಿದ ದುಂದುಗಾರಿಕೆಯ ಜೀವನವನ್ನು ನಡೆಸುತ್ತಿದ್ದ. ಸರ್ಕಾರಿ ಕೆಲಸಗಳಲ್ಲಿ ಅಸಡ್ಡೆಯಿಂದಿದ್ದ. ಅವನಿಗೆ ಮೇರಿ ಅಂಟಾಯಿನೆಟ್ ಎಂಬ ರಾಣಿಯಿದ್ದಳು. ಅವಳು ಆಸ್ಟ್ರಿಯನ್ ದೇಶದ ರಾಜಕುಮಾರಿ. ತನ್ನ ಸುಖ ಭೋಗಗಳಿಗೆ, ಹಬ್ಬಗಳಿಗೆ ದುಂದು ವೆಚ್ಚ ಮಾಡುತ್ತಿದ್ದಳು. ಜನಗಳ ಸಂಕಟದ ಕಡೆಗೆ ಅವಳಿಗೆ ಚಿಂತೆ ಇರಲಿಲ್ಲ. ಅವಳು ದೇಶದ ಆಡಳಿತ ವ್ಯವಹಾರದಲ್ಲಿ ತಲೆ ಹಾಕುತ್ತಿದ್ದಳು. ವಿದೇಶಿಯಳು ಮತ್ತು ತಮ್ಮ ವಿಷಯದಲ್ಲಿ ಪ್ರೀತಿಯಿಲ್ಲವೆಂಬ ಕಾರಣದಿಂದ ಜನರು ಅವಳನ್ನು ದ್ವೇಷಿಸುತ್ತಿದ್ದರು. ರಾಜನು ಅವಳನ್ನು ನಿಯಂತ್ರಿಸಲಾಗಲಿಲ್ಲ. ಕ್ರಮೇಣ ಪರಿಸ್ಥಿತಿ ಅವನ ಕೈಮೀರಿ ಹೋಗಿ ಕ್ರಾಂತಿಯಾಗಿ ಪರಿಣಮಿಸಿತು.

ಫ್ರೆಂಚ್ ಚಿಂತಕರ ಪ್ರಭಾವ
ಪ್ರಸಿದ್ಧ ತತ್ವಜ್ಞಾನಿಗಳು ಹಾಗೂ ವಿದ್ವಾಂಸರುಗಳಾದ ಮಾಂಟೆಸ್ಕ್ಯೂ, ರೂಸೋ ಮತ್ತು ವಾಲ್ಟೇರ್ ತಮ್ಮ ಕ್ರಾಂತಿಕಾರಿ ಬರಹಗಳಿಂದ ಕ್ರಾಂತಿಕಾರಿಗಳಿಗೆ ಉತ್ತೇಜನ ನೀಡಿದರು.
ಮಾಂಟೆಸ್ಕ್ಯೂ:- ಮಾಂಟೆಸ್ಕ್ಯೂ ತನ್ನ “ಸ್ಪಿರಿಟ್ ಆಫ್ ಲಾಸ್” ಕೃತಿಯಲ್ಲಿ ರಾಜರ ದೈವದತ್ತ  ಅಧಿಕಾರ ನಿರಾಧಾರವೆಂದು ಟೀಕಿಸಿ, ಸಂವಿಧಾನಿಕ ರಾಜ ಪ್ರಭುತ್ವಕ್ಕೆ ಬೆಂಬಲ ನೀಡಿದನು.
ರೂಸೋ:- ರೂಸೋ ತನ್ನ ಕೃತಿ “ಸಾಮಾಜಿಕ ಒಪ್ಪಂದ” ದಲ್ಲಿ “ಮಾನವ ಸ್ವತಂತ್ರವಾಗಿ ಜನಿಸಿದ ಆದರೆ ಎಲ್ಲೆಲ್ಲೂ ಸರಪಳಿಯಿಂದ ಬಂಧಿಸಲ್ಪಟ್ಟಿದ್ದಾನೆ” ಎಂದು ಹೇಳಿದ್ದಾನೆ.
ವಾಲ್ಟೇರ್:- ವಾಲ್ಟೇರ್ ಫ್ರಾನ್ಸಿನಲ್ಲಿ ಪ್ರಚಲಿತವಿದ್ದ ಸಂಪ್ರದಾಯ, ಏಕಾಚರಣೆ ಹಾಗೂ ಅಂಧಶ್ರದ್ಧೆಯನ್ನು ಖಂಡಿಸಿದನು. ಅಲ್ಲದೆ ರೋಮನ್ ಕ್ಯಾಥೋಲಿಕ್ ಚರ್ಚನ್ನು ಖಂಡಿಸಿದನು.

ಅಮೇರಿಕ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವ
ಅಮೇರಿಕ ಸ್ವಾತಂತ್ರ್ಯ ಸಂಗ್ರಾಮ ಕೂಡಾ ಫ್ರೆಂಚರ ಮೇಲೆ ಅಗಾಧ ಪ್ರಭಾವವನ್ನುಂಟು ಮಾಡಿತು. ಅಮೇರಿಕದಲ್ಲಿ ಇಂಗ್ಲೀಷರ ವಿರುದ್ಧ ಹೋರಾಡಿದ್ದ ಅನೇಕ ಫ್ರೆಂಚ್ ಸೈನಿಕರು ತಾಯ್ನಾಡಿಗೆ ಹಿಂತಿರುಗಿದರು. ಅವರು ಕ್ರಾಂತಿಕಾರಿಗಳಿಗೆ ಅವಶ್ಯಕವಾದ ಬಲ ಮತ್ತು ಉತ್ಸಾಹಗಳನ್ನು ಒದಗಿಸಿ ಕ್ರಾಂತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.

ಕ್ರಾಂತಿಯ ಪ್ರಮುಖ ಘಟನೆಗಳು
ಈ ಎಲ್ಲಾ ಘಟನೆಗಳಿಂದಾಗಿ ಫ್ರೆಂಚ್ ರಾಜನು 175 ವರ್ಷಗಳಿಂದ ಕರೆಯದಿದ್ದ “ಸ್ಟೇಟ್ಸ್ ಜನರಲ್” ಎಂಬ ಫ್ರಾನ್ಸಿನ ಶಾಸಕಾಂಗ ಸಭೆಯನ್ನು ಕರೆಯಬೇಕಾಯಿತು. ಮೂರನೆಯ ವರ್ಗದ ಸದಸ್ಯರು ತಾವೇ ರಾಷ್ಟ್ರೀಯ ಸಭೆಯೆಂದು ಘೋಷಿಸಿದೊಂಡರು. ಉಳಿದೆರೆಡು ವರ್ಗಗಳ ಸದಸ್ಯರೂ ತಮ್ಮೊಡನೆ ಸೇರುವಂತೆ ಆಹ್ವಾನಿಸಿದರು.

ಕ್ರಿ.ಶ 1789ನೇ ಇಸವಿ ಜುಲೈ 14ರಂದು “ಬ್ಯಾಸ್ಟೈಲ್” ಎಂಬ ರಾಜ್ಯ ಬಂಧೀಖಾನೆಯ ಮೇಲೆ ದಾಳಿ ಮಾಡಿ ಕೈದಿಗಳನ್ನೆಲ್ಲಾ ಬಿಡುಗಡೆ ಮಾಡಿ, ನಿರಂಕುಶ ಪ್ರಭುತ್ವಕ್ಕೆ ಅಂತ್ಯ ಹಾಡಿದರು. ಕ್ರಮೇಣ ಈ ಕ್ರಾಂತಿಯು ದೇಶದ ಇತರೆ ಭಾಗಗಳಿಗೆ ಹರಡಿತು. ರಾಜನು ಹೆಸರಿಗೆ ಮಾತ್ರ ರಾಜನಾಗಿದ್ದನು. ರಾಷ್ಟ್ರೀಯ ಸಭೆಯೇ ಎಲ್ಲಾ ಕಾನೂನುಗಳನ್ನು ರಚಿಸುತ್ತಾ ಮತ್ತು ಆಜ್ಞೆಗಳನ್ನು ಹೊರಡಿಸಿತು. ಕ್ರಿ.ಶ 1789ನೇ ಆಗಸ್ಟ್ 27ರಂದು ಮಾನವನ ಮತ್ತು ಪೌರನ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ರಾಜತ್ವವನ್ನು ತೆಗೆದುಹಾಕಿ ಗಣರಾಜ್ಯವನ್ನು ಸ್ಥಾಪಿಸಿತು.

ಈ ಕ್ರಿಯೆಯು ಹಿಂಸಾತ್ಮಕ ರೂಪವನ್ನು ತಾಳಿತು. ತೀವ್ರವಾದ ಸುಧಾರಣೆಗಳನ್ನು ಬಯಸುವ “ಜಾಕೋಬಿಯನ್ನರು” ಎಂಬ ಒಂದು ಗುಂಪು ಅಧಿಕಾರಕ್ಕೆ ಬಂದಿತು. ಕ್ರಾಂತಿ ಅಪಾಯಕಾರಿ ಸ್ಥಿತಿಯಲ್ಲಿದೆ. ಎಂದು ಅದು ಗಾಬರಿಪಟ್ಟು ಭೀತಿಯು  ಆಳ್ವಿಕೆಯಲ್ಲಿ ಕಾಣಿಸಿಕೊಂಡಿತು. ಇದರ ನಾಯಕ ರೊಬಿಸ್ಪಿಯರ್ ಪ್ರಭುತ್ವದ ಪರಯಿದ್ದ ಮತ್ತು ಶಂಕಿತ ವ್ಯಕ್ತಿಗಳನ್ನು ಹತ್ಯೆಗಾಗಿಯೇ ಅವಿಷ್ಕರಿಸಿದ್ದ ಗಿಲೋಟಿನ್ ಯಂತ್ರಕ್ಕೆ ಬಲಿ ನೀಡಿದನು.

ಪರಿಣಾಮಗಳು
ಫ್ರೆಂಚ್ ಕ್ರಾಂತಿಯು ಪ್ರಮುಖ ಘಟನೆಗಳಿಗೆ ನಾಂದಿಯಾಯಿತು. ಊಳಿಗಮಾನ್ಯ ಪದ್ಧತಿಯು ನಾಶವಾಯಿತು. ಪಾದ್ರಿಗಳು ಮತ್ತು ಶ್ರೀಮಂತರು ಹೊಂದಿದ್ದ ವಿಶೇಷ ಅಧಿಕಾರ ಮತ್ತು ಸವಲತ್ತುಗಳು ರದ್ದಾದವು. ಶ್ರೀಮಂತರ ಭೂಮಿಯನ್ನು ಕಸಿದುಕೊಳ್ಳಳಲಾಯಿತು. ಚರ್ಚ್ ರಾಜ್ಯಕ್ಕೆ ಅಧೀನವಾಯಿತು. ದೇಶದಾದ್ಯಂತ ಒಂದೇ ರೀತಿಯ ಆಡಳಿತ ಕ್ರಮವು ಜಾರಿಗೆ ಬಂದಿತು. ಜನರಿಗೆ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಆಶ್ವಾಸನೆ ಕೊಡಲಾಯಿತು.


ಏಕೀಕರಣ ಚಳುವಳಿಗಳು
ಇಟಲಿ  ಏಕೀಕರಣ
    ಪ್ರಾಚೀನ ರೋಮನ್ ಸಮ್ರಾಜ್ಯದ ವೈಭವ ಕಂಡಿದ್ದ ಇಟಲಿ ಒಂದೇ ಭಾಷೆ ಆಡುತ್ತಿದ್ದರೂ ಒಡೆದು ಚೂರಾಗಿತ್ತು.
    ರೋಮನ್ ಕ್ಯಾಥೋಲಿಕ್ ಮತವೇ ಇಟಲಿಯಲ್ಲಿ ಸಾರ್ವತ್ರಿಕವಾಗಿತ್ತು.
    19 ನೇ ಶತಮಾನದಲ್ಲಿ ಇಟಲಿ ಅನೇಕ ಸಣ್ಣ ಸಣ್ಣ ಭಾಗಗಳಾಗಿ ಒಡೆದುಹೋಗಿತ್ತು. ಅವು,
1.    ಲೊಂಬಾರ್ಡಿ
2.    ವೆನೀಶಿಯಾ
3.    ಸಿಸಿಲಿ
4.    ನೇಪಲ್ಸ್
5.    ಪೋಪರ ರಾಜ್ಯಗಳು
6.    ಟಸ್ಕನಿ
7.    ಪಾರ್ಮ
8.    ಮೊಡೇನ
9.    ಸಾರ್ಡೀನಿಯಾ, ಪಿಡ್ಮಂಟ್ ಮತ್ತು ಜಿನೋವಗಳನ್ನೊಳಗೊಂಡ ಪಿಡ್ಮಂಟ್

ಏಕೀಕರಣಕ್ಕಾಗಿ ಹೋರಾಡಿದ ಪ್ರಮುಖರು
1.    ಜೊಷೆಪ್ ಮ್ಯಾಜಿನಿ
2.    ಕೌಂಟ್ ಕವೂರ್
3.    ಗ್ಯಾರಿಬಾಲ್ಡಿ
ಜೊಷೆಪ್ ಮ್ಯಾಜಿನಿ
    ಕ್ರಾಂತಿಕಾರಿ ಚಿಂತಕ ಮತ್ತು ಬರಹಗಾರ
    ಬರಹಗಳ ಮೂಲಕ ಯುವಕರನ್ನು ರಾಷ್ಟ್ರದ ಏಕೀಕರಣ ಸ್ವಾತಂತ್ರ್ಯ ಮುಂತಾದ ಕ್ರಾಂತಿಕಾರಿ ವಿಚಾರಗಳಳಿಂದ ಹುರಿದುಂಬಿಸಿ ದಂಗೆ ಏಳುವಂತೆ ಪ್ರಚೋದಿಸಿದರು.
    ಕೃತಿ : “ಇಟಲಿ, ಆಸ್ಟ್ರೀಯ, ಪ್ಯಾಪಸಿ”
    ಪಕ್ಷ : “ತರುಣ ಇಟಲಿ” ( YOUNG ITALY )
    ಪಕ್ಷದ ಗುರಿ : ರಾಷ್ಟ್ರೀಯ ಸ್ವಾತಂತ್ರ್ಯ ಮತ್ತು ಇಟಲಿ ಏಕೀಕರಣ
ಗ್ಯಾರಿಬಾಲ್ಡಿ
    ಒಬ್ಬ ಯೋಧ ಹಾಗೂ ಹೋರಾಟಗಾರನಾಗಿದ್ದ.
    ತರುಣ ಇಟಲಿ ಪಕ್ಷವನ್ನು ಸೇರಿ ಅದರ ಕ್ರಾಂತಿಯ ನಾಯಕತ್ವ ವಹಿಸಿದನು
    ‘ಕೆಂಪಂಗಿ ದಳ’ ಎಂಬ ಸೈನ್ಯವನ್ನು ಸ್ಥಾಪಿಸಿ ಸಾರ್ಡೀನಿಯ ಜೊತೆಗೂಡಿ ಆಸ್ಟ್ರೀಯಾದೊಡನೆ ಹೋರಾಡಿದನು.
    1860 ರಲ್ಲಿ ಎರಡು ಸಿಸಿಲಿಗಳ ರಾಜ್ಯದ ಮೇಲೆ ದಾಳಿ ಮಾಡಿ ಅದನ್ನು ಆಕ್ರಮಿಸಿ ಇಟಲಿ ಏಕೀಕರಣವನ್ನು ತ್ವರಿತಗೊಳಿಸಿದನು.

ಕೌಂಟ್ ಕವೂರ್
    ಸಾರ್ದೀನಿಯಾದ ಮುಖ್ಯಮಂತ್ರಿಯಾಗಿದ್ದ ಕವೂರ್ ಇಟಲಿ ಏಕೀಕರಣದಲ್ಲಿ ಪ್ರಮೂಖ ವ್ಯಕ್ತಿಯಾಗಿದ್ದಾನೆ.
    ಪತ್ರಿಕೋದ್ಯಮಿಯಾಗಿದ್ದು, “ರಿಸಾರ್ಜಿಮೆಂಟೋ” ಪತ್ರಿಕೆಯನ್ನು ಆರಂಭಿಸಿದನು.
    ತನ್ನ ಪ್ರಭಾವಶಾಲಿ ಬರಹಗಳಿಂದ ಜನರ ಮನಸ್ಸಿನ ಮೇಲೆ ಮತ್ತು ರಾಜರುಗಳ ಮನಸ್ಸಿನ ಮೇಲೆ ಅತೀವ ಪ್ರಭಾವ ಬೀರಿದನು.
    ಇಟಲಿಯಿಂದ ಆಸ್ಟ್ರಿಯಾವನ್ನು ಹೊರದೂಡಿ ಸಾರ್ಡೀನಿಯಾವನ್ನು ಇಟಲಿಯ ದೊಡ್ಡ ಮತ್ತು ಬಲಶಾಲಿಯಾದ ರಾಜ್ಯವನ್ನಾಗಿ ಮಾಡಲು ತೀರ್ಮಾನಿಸಿದನು.
    ಸಾರ್ಡೀನಿಯಾದ ಪ್ರಧಾನಿಯಾದ ಕೂಡಲೇ ತನ್ನ ಗುರಿ ಸಾಧಿಸಲು ಕೆಲಸ ಆರಂಭಿಸಿದನು.
    ರಾಜ್ಯದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ಇಟಲಿಯನ್ನು ಅತ್ಯಂತ ಪ್ರಗತಿಪರ ರಾಜ್ಯವನ್ನಾಗಿ ಮಾಡಿದನು.
    ಕೌಂಟ್ ಕವೂರ್ ಪ್ರಾನ್ಸ್ನೊಡನೆ ರಹಸ್ಯ ಒಪ್ಪಂದವನ್ನು ಮಾಡಿಕೊಂಡು ಆಸ್ಟ್ರಿಯಾವನ್ನು ಕೆರಳಿ ಫ್ರಾನ್ಸ್ನ ಜೊತೆಗೂಡಿ ಆಸ್ಟ್ರಿಯಾವನ್ನು ಸೋಲಿಸಿ ಸಾರ್ಡೀನಿಯಾ ಮತ್ತು ಲಾಂಬಾರ್ಡಿಯಗಳನ್ನು ತನ್ನ ರಾಜ್ಯಕ್ಕೆ ಸೇರಿಸಿದನು.
    ಟಸ್ಕನಿ, ಮೊಡೆನ, ಪಾರ್ಮ ಮತ್ತು ಉತ್ತರದ ಪೋಪರ ರಾಜ್ಯಗಳಲ್ಲಿ ಕ್ರಾಂತಿಗಳಾಗಿ ಅವು ಸಾರ್ಡೀನಿಯಾದ ಜೊತೆ ಐಕ್ಯವಾದವು.
    ಕೌಂಟ್ ಕವೂರ್ ರಹಸ್ಯವಾಗಿ ಸಿಸಿಲಿಯ ಮೇಲೆ ದಂಡೆತ್ತಿ ಹೋಗುವಂತೆ ಗ್ಯಾರಿಬಾಲ್ಡಿಗೆ ಪ್ರೋತ್ಸಾಹ ನೀಡಿದನು.
    1861 ರಲ್ಲಿ ವಿಕ್ಟರ್ ಎಮ್ಯಾನುಯಲ್ ದೊರೆಯನ್ನು ಇಟಲಿಯ ರಾಜನನ್ನಾಗಿ ಘೋಷಿಸಲಾಯಿತು.
    ಇಟಲಿಗೆ ಆಸ್ಟ್ರಿಯಾದಿಂದ ವೆನಿಷಿಯಾ ದೊರೆಯಿತು.
    ಫ್ರಾನ್ಸ್ ಮತ್ತು ಪ್ರಷ್ಯಾಗಳ ನಡುವೆ ಯುದ್ಧ ಪ್ರಾರಂಬವಾದಾಗ ಫ್ರಾನ್ಸ್ ತನ್ನ ಸೈನ್ಯವನ್ನು ರೋಮ್ನಿಂದ ಹಿಂದಕ್ಕೆ ಕರೆಸಿಕೊಂಡಾಗ ವಿಕ್ಟರ್ ಎಮ್ಯಾನುಯಲ್ ರೋಮ್ ಮೇಲೆ ನುಗ್ಗಿ ಅನ್ನು ಆಕ್ರಮಿಸಿಕೊಂಡನು.
    ಇಟಲಿಯ ಏಕೀಕರಣ ಪೂರ್ಣಗೊಂಡು ರೋಮ್ ಅನ್ನು ಇಟಲಿಯ ರಾಜಧಾನಿ ಮಾಡಲಾಯಿತು.

ಜರ್ಮನಿಯ ಏಕೀಕರಣ
19 ನೆಯ ಶತಮಾನದ ಆದಿಭಾಗದಲ್ಲಿ ಜರ್ಮನಿ ಅನೇಕ ಸ್ವತಂತ್ರ ರಾಜ್ಯಗಳಾಗಿ ವಿಭಾಗವಾಗಿತ್ತು. ಅವು
1.    ವುಟೆಂಬರ್ಗ
2.    ಬವೇರಿಯ
3.    ಬೇಡನ್ ಮತ್ತು ಹೇಸ್, ಮುಂತಾದವು
    ಅವು ಪರಸ್ಪರ ಕಾದಾಡುತ್ತಿದ್ದವು.
    ಬಲಹೀನವಾಗಿದ್ದವು ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದವು.
    ಇಂತಹ ಪರಿಸ್ತಿತಿಯಿಂದ ಜನರು ಅಸಮಾಧಾನಗೊಂಡು ಸುಧಾರಣೆಗಾಗಿ ಹಾತೊರೆಯುತ್ತಿದ್ದರು.
    ಫ್ರಾನ್ಸ್ನ ಮಹಾಕ್ರಾಂತಿ ಜರ್ಮನ್ರ ರಾಷ್ಟ್ರಪ್ರಜ್ಞೆಯನ್ನು ಕೆರಳಿಸಿತ್ತು.
    ಇದರಿಂದ ಜನರು ರಾಷ್ಟ್ರೀಯ ಐಕ್ಯತೆಗಾಗಿ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗಳಿಗಾಗಿ ಆಗ್ರಹಿಸಿದರು
    ಆಸ್ಟ್ರಿಯಾ ದೇಶದ ನಾಯಕತ್ವದಲ್ಲಿ ಒಂದು ಜರ್ಮನ್ ರಾಜ್ಯಗಳ ಸಂಘ ಏರ್ಪಟ್ಟಿತ್ತು
    ಆದರೆ ರಾಜ್ಯಗಳಲ್ಲಿನ ಆಳರಸರು ತಮ್ಮ ಸ್ವಾತಂತ್ರ್ಯವನ್ನು ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು
    ಜರ್ಮನಿಯ ದೇಶಪ್ರೇಮಿಗಳು ಹಾಗೂ ರಾಷ್ಟ್ರವಾದಿಗಳು ಪ್ರಜಾಸತ್ತೆಯ ಸಂಸ್ಥೆಗಾಗಿ ಮತ್ತು ಜರ್ಮನಿಯ ಏಕೀಕರಣಕ್ಕಾಗಿ ಚಳುವಳಿಯನ್ನು ಪ್ರಾರಂಭಿಸಿದರು.
    ಆದರೆ ಆ ಚಳುವಳಿಯನ್ನು ಅಡಗಿಸಲಾಯಿತು ಹಾಗೂ ಕ್ರಾಂತಿಕಾರಿಗಳು ದೇಶ ಬಿಟ್ಟು ಓಡಿಹೋದರು
ಬಿಸ್ಮಾರ್ಕ್
    ಜರ್ಮನಿ ಏಕೀಕರಣದ ಶಿಲ್ಪಿ.
    ಪ್ರಷ್ಯಾರಾಜ್ಯದ ಒಂದನೇ ವಿಲಿಯಂನ ಮುಖ್ಯಮಂತ್ರಿಯಾಗಿದ್ದನು.
    ಇವನು ಆಸ್ಟ್ರಿಯಾ ನಾಯಕತ್ವದಲ್ಲಿನ ಜರ್ಮನ್ ರಾಜ್ಯಗಳ ಸಂಘದ ಕಾರ್ಯವೈಖರಿಗಳ ಬಗ್ಗೆ ಸೂಕ್ಷ್ಮ ಪರಿಚಯ ಹಾಗೂ ಅದರ ದೌರ್ಬಲ್ಯಗಳನ್ನು ತಿಳಿದಿದ್ದನು
    ಆಸ್ಟ್ರಿಯಾ ಫ್ರಾನ್ಸ್ ಹಾಗೂ ರಷ್ಯಾಗಳಲ್ಲಿ ರಾಯಭಾರಿಯಾಗಿ ಕೆಲಸ ಮಾಡಿ ವುಗಳ ಬಲಾಬಲ ತಿಳಿದಿದ್ದನು.
    ಜರ್ಮನಿಯ ಏಕೀಕರಣವನ್ನು ಸಾಧಿಸಲು ಪ್ರಷ್ಯಾ ಒಂದೇ ಸಮರ್ಥಶಾಲಿ ಎಂದು ಮನಗಂಡಿದ್ದನು
    ಪ್ರಷ್ಯಾವನ್ನು ಜರ್ಮನಿಯಲ್ಲಿ ಅಗ್ರರಾಜ್ಯವ್ನಾಗಿ ಮಾಡಬೇಕೆಂದು ಅಪೇಕ್ಷಿಸಿದ್ದನು
ಅತನ 2 ಗುರಿಗಳು
1.    ಆಸ್ಟ್ರಿಯಾವನ್ನು ಜರ್ಮನ್ ರಾಜ್ಯಗಳ ಸಂಘದಿಂದ ಹೊರಗಟ್ಟುವುದು
2.    ಜರ್ಮನಿಯನ್ನೇ ಪ್ರಷ್ಯಾಮಯವಾಗಿ ಮಾಡುವುದು. ಅಂದರೆ ಪ್ರಷ್ಯಾದ ಸಂಸ್ಕೃತಿ, ಸಂಪ್ರದಾಯ, ಆಡಳಿತ ಯಂತ್ರ ಮತ್ತು ಸೈನಿಕ ಬಲವನ್ನು ಜರ್ಮನಿ ದೇಶಕ್ಕೆಲ್ಲಾ ವಿಸ್ತರಿಸುವುದು

    ಜರ್ಮನಿ ಸಮಸ್ಯೆಯನ್ನು ಬಗೆಹರಿಸಲು “ ರಕ್ತ ಮತ್ತು ಕಬ್ಬಿಣ” ತತ್ವದಿಂದ ಮಾತ್ರ ಸಾಧ್ಯ ಎಂದು ಮನಗಂಡನು
    “ ರಕ್ತ ಮತ್ತು ಕಬ್ಬಿಣ” ತತ್ವ ಎಂದರೆ ಯುದ್ಧ ನೀತಿ.
    ಆಸ್ಟ್ರಿಯಾವನ್ನು ಜರ್ಮನ್ ರಾಜ್ಯಗಳ ಸಂಘದಿಂದ ಹೊರಗಟ್ಟು ಒಂದು ಬಲವಾದ ಸೈನ್ಯ ಕಟ್ಟಿದನು.
    ಡೆನ್ಮಾರ್ಕಿನ ಆಳ್ವಿಕೆಗೊಳಪಟ್ಟಿದ್ದ ಎರಡು ಸಣ್ಣ ರಾಜ್ಯಗಳಾದ ಷೇಲ್ಸ್ವಿಗ್ ಮತ್ತು ಹಾಲ್ಸ್ಟೈನ್ನ್ನು ಡೆನ್ಮಾರ್ಕ್ ಮೇಲೆ ಯುದ್ಧ ಮಾಡಿ ಅವುಗಳನ್ನು ವಶಪಡಿಸಿಕೊಂಡನು
    ಇಟಲಿಯೊಂದಿಗೆ ಒಪ್ಪಂದ ಮಾಡಿಕೊಂಡು ಆಸ್ಟ್ರಿಯಾದೊಡನೆ ಯುದ್ಧವಾದರೆ ಅದರ ಬೆಂಬಲವನ್ನು ಬಯಸಿದನು
    ಸುಸಜ್ಜಿತ ಜರ್ಮನ್ ಸೈನ್ಯಗಳು ಆಸ್ಟ್ರಿಯಾವನ್ನು ಸೋಲಿಸಿ 1866ರಲ್ಲಿ “ಉತ್ತರ  ಜರ್ಮನ್ ರಾಜ್ಯಗಳ ಸಂಘ” ವನ್ನು ರಚಿಸಿದರು
    ಪ್ರಷ್ಯಾದ ದೊರೆಯನ್ನು ಈ ರಾಜ್ಯ ಸಂಘದ ಮುಖ್ಯಸ್ಥನನ್ನಾಗಿ ಮಾಡಲಾಯಿತು
    ಜರ್ಮನಿಯ ಏಕೀಕರಣವನ್ನು ಪೂರ್ಣಗೊಳಿಸಲು ಫ್ರಾನ್ಸ್ನೊಡನೆ ಯುದ್ಧ ಅನಿವಾರ್ಯವಾಗಿತ್ತು
    3 ನೆಯ ನೆಪೋಲಿಯನ್ ಪ್ಷ್ಯಾದಮೇಲೆ ದಾಳಿ ಮಾಡಿದಾಗ ದಕ್ಷಿಣ ರಾಜ್ಯಗಳು ಅವನನ್ನು ಸೋಲಿಸಿದವು
    ಅಲ್ಸೇಸ್ ಮತ್ತು ಲೋರೇನ್ ಪ್ರಾಂತ್ಯಗಳು ಫ್ರಾನ್ಸ್ನಿಂದ ಜಜರ್ಮನಿಗೆ ದೊರೆತವು.
    ಇದರಿಂದ ಬಿಸ್ಮಾರ್ಕ್ ಉಳಿದ ರಾಜ್ಯಗಳನ್ನು ಜರ್ಮನ್ ಒಕ್ಕೂದಲ್ಲಿ ವಿಲೀನಗೊಳಿಸಿ ಜರ್ಮನಿ ಏಕೀಕರಣವನ್ನು ಪೂರ್ಣಗೊಳಿಸಿದನು
    ಪ್ರಷ್ಯಾದ ಒಂದನೇ ವಿಲಿಯಂ ಜರ್ಮನ್ ವಕ್ರವರ್ತಿ ಎಂಬ ಬಿರುದು ಧರಿಸಿದನು.





logoblog

Thanks for reading ಕ್ರಾಂತಿ ಹಾಗೂ ರಾಷ್ಟ್ರ ಪ್ರಭತ್ವಗಳ ಉದಯ

Previous
« Prev Post

No comments:

Post a Comment