Editor Posts

full ad 2 here

home 2-1

half 2-1

full ad 3 here

ಕರ್ನಾಟಕದ ಕೈಗಾರಿಕೆಗಳು

Also Read

ದೇಶದ ಯಾವುದೇ ರಾಜ್ಯದ ತ್ವರಿತವಾದ ಅಭಿವೃದ್ಧಿಯಲ್ಲಿ ಕೈಗಾರಿಕಾಭಿವೃದ್ಧಿ ಮಹತ್ವದ ಪಾತ್ರ ವಹಿಸುತ್ತದೆ.ಇಂತಹ ಉತ್ತಮ ಅವಕಾಶ ನಮ್ಮ ರಾಜ್ಯಕ್ಕಿದೆ. ಅಪಾರ ಖನಿಜ ಸಂಪತ್ತು, ಕಚ್ಚಾ ವಸ್ತುಗಳು, ಸೂಕ್ತ ವಾತಾವರಣ, ಸಾಕಷ್ಟು ನೀರಿನ ಪೂರೈಕೆ, ಸಾರಿಗೆ ವ್ಯವಸ್ಥೆ, ನುರಿತ ಕಾರ್ಮಿಕರ ಲಭ್ಯತೆ, ವಿಶಾಲ ಮಾರುಕಟ್ಟೆ ಹಾಗೂ ತಂತ್ರಜ್ಞಾನ ಇರುವುದರಿಂದ ಕರ್ನಾಟಕವು ಅನೇಕ ವೈವಿದ್ಯಮಯ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ನಮ್ಮ ರಾಜ್ಯವು ಕೃಷಿ ಆಧಾರಿತ ಗುಡಿ ಕೈಗಾರಿಕೆಗಳಿಗೆ ಆಧುನಿಕ ಕೈಗಾರಿಕೋದ್ಯಮದೆಡೆಗೆ ದಾಪುಗಾಲು ಹಾಕಿದೆ.
ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ. ‘ಕೈಗಾರಿಕೀಕರಣ ಇಲ್ಲವೆ ವಿನಾಶ’ ಎಂಬ ತತ್ವವನ್ನು ಹೊಂದಿದ್ದ ಅವರು  ರಾಜ್ಯದ ಅನೇಕ ಕೈಗಾರಿಕೆಗಳಿಗೆ ಬುನಾದಿಯನ್ನು ಹಾಕಿದರು.1902ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುಚ್ಛಕ್ತಿ ಉತ್ಪಾದನೆ ಪ್ರಾರಂಭಗೊಂಡ ಮೇಲೆ ವಿವಿಧ ಮೂಲ ಸಾಮಗ್ರಿ, ದಿನೋಪಯೋಗಿ ವಸ್ತುಗಳನ್ನು ತಯಾರಿಸುವ ಉದ್ಯಮಗಳು ಅಸ್ತಿತ್ವಕ್ಕೆ ಬಂದವು.ಅಕ್ಕಿ ಗಿರಿಣಿ, ಹೆಂಚಿನ ತಯಾರಿಕೆ, ಬೀಡಿ, ಸಿಗರೇಟು, ಕಬ್ಬಿಣ ಮತ್ತು ಹಿತ್ತಾಳೆ ಫೌಂಡ್ರಿಗಳು ಸ್ಥಾಪನೆಯಾದವು.1923ರ ನಂತರ ರಾಜ್ಯದಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ, ಸಾಬೂನು ತಯಾರಿಕೆ, ಹತ್ತಿ ಮತ್ತು ರೇಷ್ಮೆ ಗಿರಣಿ, ಕಾಗದ, ಸಮೆಂಟ್, ಬಣ್ಣ, ಸಕ್ಕರೆ, ಶ್ರೀಗಂಧದೆಣ್ಣೆ ಮುಂತಾದ ಆಧುನಿಕ ಕೈಗಾರಿಕೆಗಳು ಸ್ಥಾಪನೆಗೊಂಡವು.ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ಮೈಸೂರು ಪ್ರಾಂತ್ಯ ಕೈಗಾರಿಕೆಯಲ್ಲಿ ಮಾದರಿ ರಾಜ್ಯವಾಗಿತ್ತು.ಇದಕ್ಕೆ ಆರಂಭದಲ್ಲಿ ಬ್ರಿಟಿಷರು ಮತ್ತು ಅಂದಿನ ಆಳರಸರ ಆಸಕ್ತಿಯು ಕಾರಣ.
ಸ್ವತಂತ್ರ್ಯಾನಂತರ ಕೇಂದ್ರ ಸರಕಾರದ ಕೈಗಾರಿಕಾ ನೀತಿ ರಾಜ್ಯದ ಕೈಗಾರಿಕಾ ಪ್ರಗತಿಗೆ ಪೂರಕವಾಯಿತು.ಇದರ ಫಲವಾಗಿ ಅನೇಕ ಕೈಗಾರಿಕೆಗಳು ಸ್ಥಾಪನೆಗೊಂಡವು. ಅವುಗಳೆಂದರೆ – ವಿಮಾನ ಕೈಗಾರಿಕೆ, ಎಂಜಿನೀಯರಿಂಗ್, ಮೆಷಿನ್ ಟೂಲ್ಸ್, ಗಡಿಯಾರಗಳು, ಕಬ್ಬಿಣ ಮತ್ತು ಉಕ್ಕು, ಅಲ್ಯೂಮಿನಿಯಂ, ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ, ಜೈವಿಕ ತಂತ್ರಜ್ಞಾನ ಉದ್ಯಮ ಇತ್ಯಾದಿ.


ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ  :
ಕರ್ನಾಟಕವು ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರವಾಗಿದೆ.ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಬಾಬಾಬುಡನಗಿರಿ ಬೆಟ್ಟಗಳಲ್ಲಿ ಸಿಗುವ ಉತ್ತಮ ಹಾಗೂ ಅಪಾರ ಕಬ್ಬಿಣದ ಅದಿರನ್ನು ಬಳಸಿಕೊಳ್ಳಲು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು. ಇದನ್ನು ಮೈಸೂರು ಐರನ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ ಲಿಮಿಟೆಡ್ (MISL) ಎಂದು ಕರೆಯಲಾಯಿತು.ಆನಂತರ 1989ರಲ್ಲಿ ಭಾರತದ ಉಕ್ಕು ಪ್ರಾಧಿಕಾರಕ್ಕೆ (SAIL) ವಹಿಸಿಕೊಡಲಾಯಿತು.ಇಂದು ಇದಕ್ಕೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯೆಂದು ಹೆಸರಿಡಲಾಗಿದೆ.ಈ ಕಾರ್ಖಾನೆಗೆ ಅಗತ್ಯವಾದ ಕಬ್ಬಿಣದ ಅದಿರು ಕೆಮ್ಮಣ್ಣುಗುಂಡಿಯಿಂದ, ಬಂಡಿಗುಡ್ಡದಿಂದ ಸುಣ್ಣ, ಭದ್ರಾ ನದಿಯಿಂದ ನೀರು ಹಾಗೂ ಸಂಡೂರಿನಿಂದ ಮ್ಯಾಂಗನೀಸ್ ಪೂರೈಸಲಾಗುತ್ತದೆ.ಆರಂಭದಲ್ಲಿ ಊದುಕುಲುಮೆಗೆ ಉರುವಲನ್ನು ಉಪಯೋಗಿಸಲಾಗುತ್ತಿತ್ತು.ಶರಾವತಿ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ ಪ್ರಾರಂಭವಾದ ಮೇಲೆ ಜಲವಿದ್ಯುಚ್ಛಕ್ತಿ ಬಳಸಿಕೊಳ್ಳಲಾಗಿದೆ.ಈಗ ವಿಶೇಷ ರೀತಿಯ ಉಕ್ಕು, ಬೀಡು ಕಬ್ಬಿಣವನ್ನು ಉತ್ಪಾದಿಸಲಾಗುತ್ತಿದೆ.ಕರ್ನಾಟಕದ ಮತ್ತೊಂದು ಪ್ರಮುಖ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಖಾಸಗಿ ವಲಯದ ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್.ಇದು ಬಳ್ಳಾರಿ ಜಿಲ್ಲೆಯ ತೋರಣಗಲ್ ಎಂಬಲ್ಲಿ 2001 ರಲ್ಲಿ ಅತ್ಯಾಧುನಿಕ ಕೊರೆಕ್ಸ್ (Corex) ತಂತ್ರಜ್ಞಾನವನ್ನು ಉಪಯೋಗಿಸಿ ಸ್ಥಾಪಿಸಲಾಗಿದೆ.ಇದು ಕಬ್ಬಿಣ ಮತ್ತು ಉಕ್ಕನ್ನು ಉತ್ಪಾದಿಸುತ್ತಿದೆ.

ಹತ್ತಿ ಬಟ್ಟೆ ಕೈಗಾರಿಕೆ :
ಹತ್ತಿ ಬಟ್ಟೆ ಕೈಗಾರಿಕೆಯು ಮೊದಲಿಗೆ ಆರಂಭಗೊಂಡ ಆಧುನಿಕ ಕೈಗಾರಿಕೆಗಳಲ್ಲಿ ಒಂದಾಗಿದೆ.ಇದು ಕೃಷಿಯಾಧಾರಿತ ಕೈಗಾರಿಕೆ.ಪುರಾತನ ಕಾಲದಿಂದಲೂ ಕೈಮಗ್ಗಗಳಿಂದ ಬಟ್ಟೆ ನೇಯ್ಗೆ ಕರ್ನಾಟಕದಲ್ಲಿ ರೂಢಿಯಲ್ಲಿತ್ತು.ಈಗಲೂ ಕೈಮಗ್ಗದಿಂದ ಬಟ್ಟೆ ನೇಯುವುದು ರೂಢಿಯಲ್ಲಿದೆ.ಕೃತಕ ನಾರಿನ ಬಟ್ಟೆ, ವಿದೇಶಿ ಹತ್ತಿ ಬಟ್ಟೆಯ ಪೈಪೋಟಿಯ ನಡುವೆಯೂ ಹತ್ತಿ ಬಟ್ಟೆಗೆ ಈಗಲೂ ರಾಜ್ಯದಲ್ಲಿ ಅಪಾರ ಬೇಡಿಕೆಯಿದೆ.
ಆಧುನಿಕ ಹತ್ತಿ ಗಿರಣಿಗಳು 19ನೇ ಶತಮಾನದ ಕೊನೆಯ ಭಾಗದಲ್ಲಿ ಆರಂಭವಾಗತೊಡಗಿದ್ದವು.ಹತ್ತಿಯಿಂದ ಬೀಜ ಬೇರ್ಪಡಿಸುವ (ಜಿನ್ನಿಂಗ್ ಗಿರಣಿ), ಹತ್ತಿ ದಾರ ತೆಗೆಯುವ (ಸ್ಪಿನ್ನಿಂಗ್ ಗಿರಣಿ) ಉತ್ತರದ ಜಿಲ್ಲೆಗಳಲ್ಲಿ ಆರಂಭಗೊಂಡವು.ಮೊದಲು 1884 ರಲ್ಲಿ ಎಂ.ಎಸ್.ಕೆ.ಗಿರಣಿ ಗುಲ್ಬರ್ಗಾದಲ್ಲಿ ಸ್ಥಾಪನೆಗೊಂಡಿತು.ಆನಂತರ ಹುಬ್ಬಳ್ಳಿಯಲ್ಲಿ ಹತ್ತಿ ಬಟ್ಟೆ ಕೈಗಾರಿಕೆಗಳು ಪ್ರಾರಂಭಗೊಂಡವು.1900 ರ ನಂತರ ದೊಡ್ಡ ಹತ್ತಿ ಬಟ್ಟೆ ಗಿರಣಿಗಳು ಸ್ಥಾಪನೆಗೊಂಡವು.ಅವುಗಳಲ್ಲಿ ಬೆಂಗಳೂರಿನ ಬಿನ್ನಿ ಮಿಲ್, ಮಿನರ್ವ್ ಮಿಲ್, ಮೈಸೂರಿನ ಕೆ.ಆರ್.ಮಿಲ್, ದಾವಣಗೆರೆಯ ಕಾಟನ್ ಮಿಲ್ ಮುಂತಾದವು ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಗೊಂಡವು.
ಆನಂತರ ಹತ್ತಿ ಬೆಳೆಯುವ ಉತ್ತರದ ಬಯಲು ಪ್ರದೇಶದಲ್ಲಿ ಅಭಿವೃದ್ಧಿಗೊಂಡವು.ದಾವಣಗೆರೆಯು ರಾಜ್ಯದ ಅತಿ ಮುಖ್ಯ ಹತ್ತಿಬಟ್ಟೆ ಕೈಗಾರಿಕಾ ಕೇಂದ್ರವಾಯಿತು. ಇದನ್ನು ಕರ್ನಾಟಕದ ಮ್ಯಾಂಚೇಸ್ಟರ್ ಎಂದು ಕರೆಯುತ್ತಾರೆ. ಹುಬ್ಬಳ್ಳಿ, ಇಲಕಲ್, ಗುಳೇದಗುಡ್ಡ, ರಬಕವಿ, ಬಾಗಲಕೋಟೆ, ಮೊಣಕಾಲ್ಮೂರು, ಗದಗ-ಬೆಟಗೇರಿ, ಬಾದಾಮಿ, ನರಗುಂದ, ಗೋಕಾಕ್, ಬಳ್ಳಾರಿ, ಹುಣಸೂರು, ನಂಜನಗೂಡು,ಪಿರಿಯಾಪಟ್ಟಣ ಚಾಮರಾಜನಗರಗಳಲ್ಲೂ ಹತ್ತಿ ಬಟ್ಟೆ ನೂಲುವ, ನೇಯುವ ಗಿರಣಿಗಳಿವೆ. ಪ್ರಸ್ತುತ ರಾಜ್ಯದಲ್ಲಿ 44 ಹತ್ತಿ ಬಟ್ಟೆ ಗಿರಣಿಗಳಿವೆ.ವಾರ್ಷಿಕ ಸರಾಸರಿ 5.1 ದಶಲಕ್ಷ ಮೀಟರ್ ಹತ್ತಿ ಬಟ್ಟೆಯನ್ನು ಉತ್ಪಾದಿಸಲಾಗುತ್ತದೆ.
ಇತ್ತೀಚೆಗೆ ಹತ್ತಿ ಗಿರಣಿಗಳು ಮುಚ್ಚಲ್ಪಟ್ಟಿವೆ.ಇದಕ್ಕೆ ಕಚ್ಚಾ ಹತ್ತಿಯ ಕೊರತೆ, ಹಳೆಯ ಯಂತ್ರಗಳು, ವಿದ್ಯುಚ್ಛಕ್ತಿಯ ಕೊರತೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಕೃತಕ ನಾರಿನ ಬಟ್ಟೆಯ ಪೈಪೋಟಿ ಇತ್ಯಾದಿ ಕಾರಣಗಳಾಗಿವೆ.
    ಕರ್ನಾಟಕದಲ್ಲಿ ಜವಳಿ ಉಧ್ಯಮದ ಪರಿಸ್ಥಿತಿಯನ್ನು ಸುಧಾರಿಸಲು ‘ಸುವರ್ಣ ಜವಳಿ ನೀತಿ 2008-13’ ಎಂಬ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿ, 11 ಜಿಲ್ಲೆಗಳಲ್ಲಿ ಬಟ್ಟೆಯ ಸಿದ್ಧ ಉಡುಪಿನ ಪಾರ್ಕಗಳನ್ನು ಸ್ಥಾಪಿಸಿದೆ. ಇವುಗಳ ಉತ್ಪಾದನೆಯನ್ನು ವಿದೇಶಗಳಿಗೆ ರಫ್ತು ಮಾಡುವುದು ಇದರ ಉದ್ದೇಶವಾಗಿದೆ.ಈಗಾಗಲೇ ಬಟ್ಟೆ ರಫ್ತಿನಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.ದೊಡ್ಡಬಳ್ಳಾಪುರ, ಆನೆಕಲ್, ಬೆಳಗಾವಿ, ಮೈಸೂರು, ರಾಮನಗರಗಳಲ್ಲಿ ಇಂತಹ ಪಾರ್ಕಗಳಿವೆ.

ಸಕ್ಕರೆ ಕಾರ್ಖಾನೆ :
ಸಕ್ಕರೆ ಕೈಗಾರಿಕೆಯು ಕರ್ನಾಟಕದ ಪ್ರಮುಖ ಬೃಹತ್ ಪ್ರಮಾಣದ ಉಧ್ಯಮಗಳಲ್ಲಿ ಒಂದಾಗಿದೆ.ಇದೂ ಸಹ ಕೃಷಿ ಆಧಾರಿತವಾದುದು.ಇದರ ಪ್ರಗತಿಗೆ ಅಗತ್ಯವಾದ ಎಲ್ಲಾ ಸ್ಥಾನೀಕರಣ ಅಂಶಗಳು ರಾಜ್ಯದಲ್ಲಿ ಪೂರಕವಾಗಿವೆ.ಕಬ್ಬು ಉತ್ಪಾದನೆ, ಉತ್ತಮ ಹವಾಮಾನ, ವಿದ್ಯುತ್ ಸರಬರಾಜು, ಸ್ಥಳೀಯ ಮಾರುಕಟ್ಟೆ, ಸಾರಿಗೆ ವ್ಯವಸ್ಥೆ ಇತ್ಯಾದಿ.ಇದು ಕರ್ನಾಟಕದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲೇ ಶ್ರೀರಂಗಪಟ್ಟಣದ ಪಾಲಳ್ಳಿ (ಅಷ್ಟಗ್ರಾಮ) ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಸಕ್ಕರೆ ತಯಾರಿಸುತ್ತಿದ್ದನ್ನು ಸರ್ ಪ್ರಾನ್ಸಿಸ್ ಬುಕಾನನ್ ಉಲ್ಲೇಖಿಸಿರುವನು.ಅವು 1847 ರಲ್ಲಿಯೇ ಸಕ್ಕರೆಯನ್ನು ಉತ್ಪಾದಿಸುತ್ತಿದ್ದು, ಲಂಡನ್ನಿನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದುದು ದಾಖಲೆಯಿಂದ ತಿಳಿದುಬಂದಿದೆ. ಮೊಟ್ಟಮೊದಲ ಆಧುನಿಕ ಸಕ್ಕರೆ ಕೈಗಾರಿಕೆ 1933 ರಲ್ಲಿ ;ಮೈಸೂರು ಸಕ್ಕರೆ ಕಂಪನಿ’(Mysugar) ಮಂಡ್ಯದಲ್ಲಿ ಪ್ರಾರಂಭವಾಯಿತು. 1951 ರವರೆಗೂ ಒಂದೇ ಕಾರ್ಖಾನೆಯಿತ್ತು.ಇಂದು ರಾಜ್ಯದಲ್ಲಿ ಒಟ್ಟು 47 ಸಕ್ಕರೆ ಕಾರ್ಖಾನೆಗಳಿವೆ.ವಾರ್ಷಿಕ ಉತ್ಪಾದನೆ 339 ಲಕ್ಷ ಟನ್ನುಗಳಷ್ಟಿದ್ದು ಭಾರತದಲ್ಲೇ ಮೂರನೇ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಸಕ್ಕರೆ ಕೈಗಾರಿಕೆಗಳ ಹಂಚಿಕೆ
ಕರ್ನಾಟಕದ ಸಕ್ಕರೆ ಕೈಗಾರಿಕೆಯು ವಿಶೇಷವಾಗಿ ಕಬ್ಬು ಬೆಳೆಯುವ ಪ್ರದೇಶಗಳಲ್ಲೇ ಹಂಚಿಕೆಯಾಗಿದೆ.ಕಾವೇರಿ, ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಕೇಂದ್ರಿಕೃತವಾಗಿವೆ.ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ, ತರುವಾಯ ಮಂಡ್ಯ, ಮೈಸೂರು, ಬೀದರ್, ಬಿಜಾಪೂರ, ಗುಲ್ಬರ್ಗಾ, ಬಳ್ಳಾರಿ ಮತ್ತು ದಾವಣಗೇರೆ ಜಿಲ್ಲೆಗಳು ಪ್ರಮುಖವಾದವು.
ಕಬ್ಬಿನ ಸಿಪ್ಪೆ ಮತ್ತು ಕಾಕಂಬಿಗಳು ಈ ಉದ್ಯಮದಿಂದ ದೊರೆಯುವ ಉಪ ಪದಾರ್ಥಗಳು.ಕಬ್ಬಿನ ಸಿಪ್ಪೆಯಿಂದ ಕಾಗದದ ತಯಾರಿಕೆ ಹಾಗೂ ಇಂಧನವನ್ನಾಗಿ ಬಳಸುವರು.ಕಾಕಂಬಿಯಿಂದ ಮದ್ಯಸಾರವನ್ನು ಉತ್ಪಾದಿಸುವರು.

ಕಾಗದ ಕೈಗಾರಿಕೆ :
ಕಾಗದವು ಆಧುನಿಕ ಜಗತ್ತಿನಲ್ಲಿ ಮಹತ್ವದ ವಸ್ತುವಾಗಿದೆ.ಶಿಕ್ಷಣ, ಮುದ್ರಣ, ವೃತ್ತಪತ್ರಿಕೆ ಹಾಗೂ ಸಂಸ್ಕೃತಿಯ ವಿಕಾಸಕ್ಕೆ ಅಗತ್ಯವಾದ ವಸ್ತುವಾಗಿದೆ.ಕಾಗದ ಕೈಗಾರಿಕೆಯು ಅರಣ್ಯಾಧಾರಿತವಾದುದು.ಈ ಕೈಗಾರಿಕೆಗೆ ಬಿದಿರು, ಮರದ ತಿರುಳು, ಹುಲ್ಲು, ಕಬ್ಬಿನ ಸಿಪ್ಪೆ, ಚಿಂದಿಬಟ್ಟೆ, ರದ್ದಿ ಕಾಗದಗಳನ್ನು ಕಚ್ಚಾ ಪದಾರ್ಥಗಳಾಗಿ ಬಳಸಲಾಗುವುದು. ಮೊಟ್ಟಮೊದಲು ಕರ್ನಾಟಕದಲ್ಲಿ ಶಿವಮೊಗ್ಗ ಮತ್ತು ಚಿಕಮಗಳೂರು ಜಿಲ್ಲೆಯ ದಟ್ಟವಾದ ಅರಣ್ಯವನ್ನು ಗಮನದಲ್ಲಿಟ್ಟುಕೊಂಡು ಭದ್ರಾವತಿಯಲ್ಲಿ ‘ಮೈಸೂರು ಪೇಪರ್ ಮಿಲ್ ಲಿಮಿಟೆಡ್’ ಕಾರ್ಖಾನೆಯು 1936ರಲ್ಲಿ ಪ್ರಾರಂಭವಾಯಿತು. ಅನಂತರ ‘ವೆಸ್ಟ್ ಕೋಸ್ಟ್ ಪೇಪರ್ ಮಿಲ್’ ಖಾಸಗಿ ಕಂಪನಿಯಿಂದ ದಾಂಡೇಲಿಯಲ್ಲಿ ಸ್ಥಾಪನೆಗೊಂಡಿತು.ಸಮೀಪದ ಅರಣ್ಯಗಳ ಬಿದಿರು, ನೀಲಗಿರಿ ಮರದ ತಿರುಳು, ಕಾಳಿನದಿ ನೀರು, ಜೋಗ್ ನಿಂದ ವಿದ್ಯುತ್ ಪೂರೈಕೆಯಾಗುತ್ತದೆ.ನಂಜನಗೂಡು, ಕೃಷ್ಣರಾಜನಗರ, ಸತ್ಯಗಾಲ, ಮುಂಡಗೋಡ, ಮುನಿರಾಬಾದ, ಯಡಿಯೂರು ಮತ್ತು ಬೆಂಗಳೂರಿನಲ್ಲಿ ರಾಜ್ಯದ ಇತರ ಕಾಗದ ತಯಾರಿಕಾ ಘಟಕಗಳಿವೆ.ದೇಶದ ಕಾಗದ ಉತ್ಪಾದಿಸುವ ರಾಜ್ಯಗಳಲ್ಲಿ ಕರ್ನಾಟಕವು ನಾಲ್ಕನೆಯ ಸ್ಥಾನದಲ್ಲಿದೆ.ಕರ್ನಾಟಕವು ವರ್ಷಕ್ಕೆ 3.6 ಲಕ್ಷ ಟನ್ ಕಾಗದ ವಸ್ತುಗಳನ್ನು ಉತ್ಪಾದಿಸುತ್ತದೆ.

ಸಿಮೆಂಟ್ ಕೈಗಾರಿಕೆ :
ಕರ್ನಾಟಕದಲ್ಲಿ ನಗರೀಕರಣ ಮತ್ತು ಕೈಗಾರಿಕೀಕರಣ ವಿಸ್ತರಣೆ ಹೆಚ್ಚಾಗಿದ್ದರಿಂದ ನಿರ್ಮಾಣ ಕಾರ್ಯಗಳಿಗೆ ಸಿಮೆಂಟಗೆ ಬೇಡಿಕೆ ಹೆಚ್ಚಾಗಿದೆ.ಮನೆ ಕಟ್ಟಲು, ದೊಡ್ಡ ಸಾರ್ವಜನಿಕ ಕಟ್ಟಡಗಳ ನಿರ್ಮಾಣ, ರಸ್ತೆ ಸೇತುವೆ, ಆಣೆಕಟ್ಟೆ ಮೊದಲಾದವುಗಳ ನಿರ್ಮಾಣಕ್ಕೆ ಸಿಮೆಂಟ ಬೇಕು.
ಸಿಮೆಂಟ್ ಕೈಗಾರಿಕೆಯ ಸ್ಥಾಪನೆಗೆ ಅಗತ್ಯವಾದ ಅಪಾರವಾದ ಸುಣ್ಣಕಲ್ಲು ರಾಜ್ಯದಲ್ಲಿ ದೊರೆಯುತ್ತದೆ.ಜೊತೆಗೆ ಜಿಪ್ರಂ ಮತ್ತು ಬಾಕ್ಸೈಟಗಳೂ ದೊರೆಯುತ್ತವೆ.ಕಲ್ಲಿದ್ದಲು ಮಾತ್ರ ನೆರೆಯ ರಾಜ್ಯಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ.ನೀರು, ಮರಳು, ಸಾರಿಗೆ, ವಿದ್ಯುಚ್ಛಕ್ತಿ, ಜೇಡಿಮಣ್ಣು, ವಿಶಾಲವಾದ ಮಾರುಕಟ್ಟೆ ಸೌಲಭ್ಯಗಳೂ ಸಹ ಸಿಮೆಂಟ್ ಕೈಗಾರಿಕಾಭಿವೃದ್ಧಿಗೆ ಸಹಾಯಕವಾಗಿವೆ.
ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆಯು 1939 ರಲ್ಲಿ ಭದ್ರಾವತಿಯಲ್ಲಿ ಸ್ಥಾಪಿತವಾಯಿತು.ನಂತರ ಬಾಗಲಕೋಟೆ, ತುಮಕೂರು ಜಿಲ್ಲೆಯ ಅಮ್ಮಸಂದ್ರ, ಗುಲ್ಬರ್ಗಾ ಜಿಲ್ಲೆಯ ಶಹಾಬಾದಗಳಲ್ಲಿ ಸ್ಥಾಪಿಸಲ್ಪಟ್ಟವು.ಇತರ ಸಿಮೆಂಟ್ ಕೈಗಾರಿಕೆ ಕೇಂದ್ರಗಳೆಂದರೆ – ವಾಡಿ, ಲೋಕಾಪುರ, ಇಟ್ಟಿಗೆಹಳ್ಳಿ, ಮಡಕೆರೆ, ಕಂಚಿಪುರ, ಕಲದಗಿ, ಕುರಕುಂಟ, ಸೇಡಂ ಮತ್ತು ಚಿತ್ತಾಪುರ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.8 ಭಾಗದಷ್ಟು ಕರ್ನಾಟಕ ಉತ್ಪಾದಿಸುತ್ತದೆ.ರಾಜ್ಯಕ್ಕೆ ಈಗ ಸುಮಾರು 121 ಲಕ್ಷ ಟನ್ನುಗಳಷ್ಟು ವಾರ್ಷಿಕ ಸಿಮೆಂಟ್ ಉತ್ಪಾದಿಸುವ ಸಾಮರ್ಥ್ಯವಿದೆ.


ಮಾಹಿತಿ ತಂತ್ರಜ್ಞಾನದ ಉದ್ಯಮಗಳು
ಕರ್ನಾಟಕವು ಭಾರತದ ಪ್ರಮುಖ ಜ್ಞಾನ ಮತ್ತು ತಾಂತ್ರಿಕತೆಯ ರಾಜ್ಯವಾಗಿದ್ದು, ಇಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮಗಳು ಹೆಚ್ಚು ಅಭಿವೃದ್ಧಿಗೊಂಡಿವೆ. ಅನೇಕ ಎಂಜಿನೀಯರಿಂಗ್ ಕಾಲೇಜುಗಳು, ಸಂಶೋಧನಾ ಕೇಂದ್ರಗಳು, ಕಂಪ್ಯೂಟರ್ ಆಧಾರಿತ ತಂತ್ರಜ್ಞಾನದ ಕೋರ್ಸಗಳಿಗೆ ಹೆಚ್ಚು ಒತ್ತು ನೀಡಿರುವುದರಿಂದ ಪರಿಣತಿ ಹೊಂದಿರುವ ಅಪಾರ ಮಾನವ ಶಕ್ತಿಯನ್ನು ಹೊಂದಿದೆ. ಇದರಿಂದ ಅನೇಕ ಸಾಫ್ಟವೇರ್ ಉದ್ಯಮಗಳು ಸ್ಥಾಪನೆಗೊಂಡು ಇಂದು ಕರ್ನಾಟಕವು ಭಾರತದಲ್ಲೇ ಅತ್ಯುನ್ನತ ಸ್ಥಾನದಲ್ಲಿದೆ.

ಬೆಂಗಳೂರು : ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಕೇಂದ್ರ
ಬೃಹತ್ ಬೆಂಗಳೂರು ನಗರವು ಭಾರತದ ‘ಸಿಲಿಕಾನ್ ಕಣಿವೆ’ ಎಂದೇ ಪ್ರಸಿದ್ಧಿಯಾಗಿದೆ.ಸಾಫ್ಟವೇರ್ (ತಂತ್ರಾಂಶ) ಅಥವಾ ಕಂಪ್ಯೂಟರ್ ಪ್ರೋಗ್ರಾಂಗಳಿಗೆ ಉಪಯೋಗಿಸುವ ಸಾಮಗ್ರಿಗಳ ಉತ್ಪಾದನೆ ಹಾಗೂ ರಫ್ತು ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ.ಇದು ಪ್ರಪಂಚದ ಹತ್ತು ಪ್ರಮುಖ ಉನ್ನತ ತಂತ್ರಜ್ಞಾನದ (ಹೈಟೆಕ್) ನಗರಗಳಲ್ಲಿ ಒಂದಾಗಿದೆ.ಇದರಿಂದ ಸಮೀಪದ ಇತರ ನಗರಗಳಲ್ಲೂ ಸಾಫ್ಟವೇರ್ ಉದ್ಯಮ ವ್ಯಾಪಿಸಿದೆ.ಈ ನಗರವೊಂದರಲ್ಲೇ 1200 ಐ.ಟಿ.ಬಿ.ಟಿ.ಕೈಗಾರಿಕೆಗಳು ಇದ್ದು, ಸುಮಾರು 4 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸಿವೆ.ಇಲ್ಲಿ ಪ್ರಪಂಚದ ಹಲವು ಪ್ರಸಿದ್ಧ ಕಂಪನಿಗಳು ತಮ್ಮ ಶಾಖೆಗಳನ್ನು ಸ್ಥಾಪಿಸಿವೆ. ಇದಕ್ಕೆ ಕಾರಣ  ಉತ್ತಮ ಹವಾಮಾನ, ವಿದ್ಯುತ್ ಪೂರೈಕೆ, ತಾಂತ್ರಿಕ ಪರಿಣಿತರು, ಆರ್ಥಿಕ ನೆರವು, ವಿಶಾಲವಾದ ಮಾರುಕಟ್ಟೆ ಹಾಗೂ ಮೂಲ ಸೌಕರ್ಯಗಳಿರುವುದರಿಂದ ಬೃಹತ್ ಬೆಂಗಳೂರು ಭಾರತದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮಿದೆ.
ಬೆಂಗಳೂರಿನಲ್ಲಿ ಇನ್ಫೋಸಿಸ್, ವಿಪ್ರೋ ಮೊದಲಾದ ಪ್ರತಿಷ್ಠಿತ ಕಂಪನಿಗಳಿವೆ.ಅವುಗಳ ಶಾಖೆ ರಾಜ್ಯದ ಇತರ ಕೆಲವು ನಗರ ಕೇಂದ್ರಗಳಲ್ಲೂ ಕಂಡು ಬರುತ್ತವೆ. ಉದಾ : ಮೈಸೂರು, ಹುಬ್ಬಳ್ಳಿ, ಗುಲ್ಬರ್ಗಾ, ಶಿವಮೊಗ್ಗ, ತುಮಕೂರು, ಮಂಗಳೂರು ಮುಂತಾದವು. ಮಾನವ ಸಂಪನ್ಮೂಲದ ಮಾಹಿತಿ, ನೇಮಕಾತಿ, ತರಬೇತಿ, ಪಠ್ಯಕ್ರಮ ಮುಂತಾದವುಗಳನ್ನು ತಿಳಿಸುವುದಕ್ಕೆ ಈ ಉದ್ಯಮ ಹೆಚ್ಚು ಸೂಕ್ತ.

ಕರ್ನಾಟಕದ ಕೈಗಾರಿಕಾ ವಲಯಗಳು
ರಾಜ್ಯದಲ್ಲಿ ಕೈಗಾರಿಕೆಗಳು ವ್ಯಾಪಿಸಿರುವ ಆಧಾರದಲ್ಲಿ ಕರ್ನಾಟಕವನ್ನು ಐದು ಕೈಗಾರಿಕಾ ವಲಯಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ –
•    ಬೆಂಗಳೂರು – ಕೋಲಾರ – ತುಮಕೂರು – ಕೈಗಾರಿಕಾ ವಲಯ – ಇದು ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಪ್ರದೇಶವಾಗಿದೆ.
•    ಬೆಳಗಾವಿ – ಧಾರವಾಡ ವಲಯ
•    ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ
•    ಬಳ್ಳಾರಿ – ರಾಯಚೂರು – ಕೊಪ್ಪಳ ಜಿಲ್ಲಾ ಕೈಗಾರಿಕಾ ವಲಯ
•    ಮೈಸೂರು – ಮಂಡ್ಯ ಕೈಗಾರಿಕಾ ವಲಯ.

Post a Comment

0 Comments